ಸುಖೀ ದಾಂಪತ್ಯ ೧೯೩
ಗಂಡಸರು ಸಹಜವಾಗಿ ಬಂದ ಪುರುಷತ್ವವನ್ನು ಸವಾಲೆಂದು ಒಪ್ಪಿಕೊಂಡು ಆಗಾಗ ಸಾಬೀತು ಪಡಿಸಬೇಕಾಗುತ್ತದೆ.
193: ಪುರುಷರ ನಾಕ–ನರಕ: 2
ಪುರುಷರ ಬಗೆಗೆ ಮಾತಾಡುತ್ತಿದ್ದೇವೆ. ಗಂಡಸಾಗಿದ್ದೇನೆ ಎಂದು ಗೊತ್ತಿದ್ದರೂ ಹೆಚ್ಚು ಗಂಡಸಾಗಲು, ಸಂಗಾತಿಯ ಜೊತೆಗೆ ಕಾಮಕೂಟದಲ್ಲೂ ಒಂಟಿಯಾಗಲು, ಸಂಗಾತಿಯ ಸಮಸ್ಯೆಯನ್ನು ತನ್ನ ಗಂಡಸುತನದಿಂದ ಸರಿದೂಗಿಸಲು ಹಿಂದಿರುವ ಕಾರಣಗಳನ್ನು ಈ ಸಲ ನೋಡೋಣ. ಇದಕ್ಕಾಗಿ ಒಂದು ನಿತ್ಯದೃಷ್ಟಾಂತ:
ಗಂಡ ಕೆಲಸದಿಂದ ಮನೆಗೆ ಬರುತ್ತಾನೆ. ಬಟ್ಟೆ ಬದಲಿಸಿ ಕಾಫಿ ಕೇಳುತ್ತಾನೆ. ಹೆಂಡತಿ ಕಪ್ ಮುಂದೆ ಚಾಚುತ್ತ, “ಇವೊತ್ತು ಬೆಳಿಗ್ಗೆ ಅವಸರದಲ್ಲಿ ಹಾಲೆಲ್ಲ ಉಕ್ಕಿ ಚೆಲ್ಲಿಹೋಯಿತು.”
ಗಂಡ: (ಕಾಫಿಯೊಳಗೆ ಇಣುಕಿ ನೋಡುತ್ತ ಗೊಂದಲದಿಂದ) “ಮತ್ತೆ ಇದರಲ್ಲಿ ಹಾಲು ಹಾಕಿದೆಯಲ್ಲ?”
“ನಾನು ಇನ್ನೊಮ್ಮೆ ಕೊಂಡುಕೊಂಡು ಬಂದೆ.”
ಗಂ; (ಇನ್ನೂ ಗೊಂದಲದಿಂದ) “…ಹಾಗಾದರೆ ನನಗೆ ಹೇಳುವ ಅಗತ್ಯ ಏನಿತ್ತು?“
ಹೆಂ; (ಮುಖ ಗಂಟು ಹಾಕಿ) “ನಿಮಗೇನೂ ಅರ್ಥವಾಗುವುದಿಲ್ಲ! ಗಂಡಸರ ಸ್ವಭಾವವೇ ಹೀಗೆ!”
ಗಂಡ ಅವಮಾನವಾದಂತೆ ಅವಳನ್ನೇ ದಿಟ್ಟಿಸುತ್ತಾನೆ. ಹೆಂಗಸರನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅವನೂ, ಗಂಡಸರನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯವೆಂದು ಅವಳೂ ಅಂದುಕೊಳ್ಳುತ್ತಾರೆ. ಹತ್ತಿರವಾಗಲು ಹೊರಟವರು ದೂರ ಸರಿಯುತ್ತಾರೆ.
ಇಲ್ಲೇನು ನಡೆಯುತ್ತಿದೆ? ಹೆಂಡತಿಯು ಭಾವನಾತ್ಮಕವಾಗಿ ಹಂಚಿಕೊಳ್ಳಲು ನೋಡಿದರೆ ಗಂಡ ಸಮಸ್ಯೆ-ಪರಿಹಾರದ ದೃಷ್ಟಿಯಿಂದ ಯೋಚಿಸುತ್ತಿದ್ದಾನೆ. ಹೆಣ್ಣುಗಂಡುಗಳ ವಿಚಾರ, ಭಾವನೆ, ಸ್ಪಂದನೆ, ಹಾಗೂ ವರ್ತನೆಗಳಲ್ಲಿ ನಡುವೆ ವ್ಯತ್ಯಾಸಗಳು ಎಷ್ಟಿವೆ ಎಂದರೆ ಹೆಣ್ಣುಗಂಡುಗಳು ಬೇರೆಬೇರೆ ಗ್ರಹಗಳಿಂದ ಬಂದ ಜೀವಿಗಳೆಂದು ಭಾಸವಾಗುತ್ತದೆ ಎಂದು ಜಾನ್ ಗ್ರೇ ಹೇಳುತ್ತಾನೆ (Men Are From Mars, Women Are From Venus: John Gray). ಈ ವ್ಯತ್ಯಾಸಗಳು ಹುಟ್ಟಿನಿಂದ ಬಂದಿವೆಯೆಂದು ಅವನ ಸಿದ್ಧಾಂತ. ಇದನ್ನು ಅನೇಕರು ನಂಬುತ್ತಾರೆ, ಆದರೆ ನಾನಿದನ್ನು ಒಪ್ಪುವುದಿಲ್ಲ. ಸ್ವಭಾವತಃ ಎಲ್ಲ ಹೆಂಗಸರೂ ಒಂದು ತರಹ, ಎಲ್ಲ ಗಂಡಸರೂ ಇನ್ನೊಂದು ತರಹ ಇದ್ದರೆ ಯಾವ ದಾಂಪತ್ಯವೂ ಸರಿಯಾಗಿ ಇರುತ್ತಿರಲಿಲ್ಲ -ಆದರೆ ಕೆಲವು ದಾಂಪತ್ಯಗಳು ಯಶಸ್ವಿ ಆಗಿವೆಯಲ್ಲ? ಅದಿರಲಿ, ಹೆಂಗಸರಲ್ಲಿ ಅನೇಕ ವಿಚಾರವಾದಿಗಳು, ವಿಜ್ಞಾನಿಗಳು, ವ್ಯವಹಾರ ತಜ್ಞರು ಇರುವಂತೆ ಗಂಡಸರಲ್ಲಿ ಕವಿಗಳು, ಸಾಹಿತಿಗಳಂಥ ಭಾವಜೀವಿಗಳು ಇದ್ದಾರೆ. ಆದುದರಿಂದ ಹುಟ್ಟುಸ್ವಭಾವದ ಸಿದ್ಧಾಂತವನ್ನು ಬದಿಗಿಟ್ಟು, ಈ ಭಿನ್ನ ಸ್ವಭಾವಗಳು ಎಲ್ಲಿಂದ ಬಂದಿರಬಹುದು ಎಂದು ನೋಡೋಣ. ಅದಕ್ಕಾಗಿ ಒಂದು ದೃಷ್ಟಾಂತ:
ಎರಡು ವರ್ಷದ ಅವಳಿಗಳು – ಒಂದು ಹೆಣ್ಣು, ಇನ್ನೊಂದು ಗಂಡು – ನನ್ನೆದುರು ಆಟವಾಡುತ್ತಿದ್ದರು. ಆಡುತ್ತ ಆಡುತ್ತ ಇಬ್ಬರೂ ಒಂದೇಸಲ ಬಿದ್ದು ಅಳಲು ಶುರುಮಾಡಿದರು. ನಾನು ನೋಡುತ್ತಿದ್ದಂತೆ, ಅವರಮ್ಮ ಧಾವಿಸಿ ಬಂದವಳೇ ಅಯ್ಯೋ ಎನ್ನುತ್ತ ಹೆಣ್ಣುಮಗುವನ್ನು ಎತ್ತಿ ತಬ್ಬಿಕೊಂಡಳು. ಎದುರಿರುವ ಗಂಡುಮಗುವನ್ನು ಉದ್ದೇಶಿಸಿ ದೃಢವಾಗಿ ಹೇಳಿದಳು: “ಅಳಬೇಡ, ನಿನಗೇನೂ ಆಗಿಲ್ಲ!” ಕಿಶೋರ ಥಟ್ಟನೆ ಅಳು ನಿಲ್ಲಿಸಿ ದಿಗ್ಭ್ರಮೆಯಿಂದ ಅವಳನ್ನೇ ದಿಟ್ಟಿಸಿದ. ಆ ಒಂದು ಕ್ಷಣದಲ್ಲಿ ಏನೇನು ನಡೆಯಿತು? ತಾಯಿಯು ಹೆಣ್ಣುಮಗುವಿನ ಭಾವನಾತ್ಮಕ ಅಗತ್ಯಕ್ಕೆ ಸ್ಪಂದಿಸುತ್ತ ಗಂಡಿನ ಭಾವನಾತ್ಮಕ ಅಗತ್ಯವನ್ನು ಅಲ್ಲಗಳೆದಳು! ನಾನು ಕೇಳಿದಾಗ ಉತ್ತರ ಸ್ಪಷ್ಟವಾಗಿತ್ತು: “ಅವನು ಹುಡುಗ. ಹುಡುಗರು ಹುಡುಗಿಯರಿಗಿಂತ ಗಟ್ಟಿಯಾಗಿರುತ್ತಾರೆ. ಅವರಿಗೆ ಧೈರ್ಯ, ನೋವು ಸಹಿಸುವ ಶಕ್ತಿ ಹೆಚ್ಚಿಗಿರುತ್ತದೆ.” ಎಂದು ಮಗನ ಕಡೆಗೆ ಅರ್ಧ ಹೆಮ್ಮೆ, ಅರ್ಧ ಅಸಮಾಧಾನದಿಂದ ನೋಡಿದಳು. ಹೆರಿಗೆಯ ನೋವು ತಡೆದುಕೊಳ್ಳುವವರು ಯಾರು ಎಂದು ಕೇಳಬೇಕೆಂದವನು ಸುಮ್ಮನಿದ್ದೆ. ಇಲ್ಲಿ ಪ್ರಶ್ನೆ ನೋವಿನದಲ್ಲ, ಆಘಾತದ್ದು. ಬಿದ್ದುದರಿಂದ ಹುಡುಗಿಗೆ ಆಗುವಂತೆ ಮಾನಸಿಕ ಆಘಾತ ಹುಡುಗನಿಗೂ ಆಗಿತ್ತು. ಅದಕ್ಕೆಂದೇ ಅವನು ಅತ್ತಿದ್ದು. ಆದರೆ ತಾಯಿಯು ಹುಡುಗಿಯ ಭಾವನೆಗಳಿಗೆ ಬೆಲೆ ಕೊಡುತ್ತ, ಹುಡುಗನ ಭಾವನೆಗಳನ್ನು ಅಲ್ಲಗಳೆದಳು. ಜೊತೆಗೆ ಅವನಿಗೊಂದು ಸಂದೇಶವನ್ನೂ ನೀಡಿದಳು: “ನೀನು ಗಂಡಾಗಿ ಹುಟ್ಟಿರುವುದರಿಂದ ನಿನ್ನ ಭಾವನೆಗಳಿಗೆ ನಾನು ಬೆಲೆ ಕೊಡುತ್ತಿಲ್ಲ – ನೀನೂ ಬೆಲೆ ಕೊಡಕೂಡದು!”
ಈ ಗಂಡುಮಗುವಿಗೆ ಕೊಟ್ಟ ಸಂದೇಶವನ್ನು ಬಹುತೇಕ ಎಲ್ಲ ಗಂಡುಮಕ್ಕಳಿಗೂ ಕೊಡಲಾಗುತ್ತದೆ. “ಗಂಡಾಗಿರುವುದರಿಂದ ನೀನು ಅಳಕೂಡದು, ಭಯಪಡಕೂಡದು. ನಿನ್ನೊಳಗೆ ಹುಟ್ಟುವ ಸೂಕ್ಷ್ಮ ಭಾವನೆಗಳನ್ನು ಕಟ್ಟಿಡಬೇಕು. ನೋವನ್ನು ನುಂಗಿಕೊಳ್ಳಬೇಕು. ಜಗತ್ತು ನಿನ್ನಿಂದ ಅಪೇಕ್ಷಿಸುವುದನ್ನು ಸಾಧಿಸಿ ತೋರಿಸಬೇಕು. ಧೈರ್ಯದಿಂದ ಮುನ್ನುಗ್ಗಬೇಕು, ಕಷ್ಟಪಡಬೇಕು. ಮುಂದೆ ಬರಬೇಕು. ಹೆಣ್ಣಿಗೆ ನೆರವಾಗಬೇಕು – ಯಾಕೆಂದರೆ ಅವಳು ಅಬಲೆ. ಅವಳ ಜವಾಬ್ದಾರಿ ನಿನ್ನದು. ಒಟ್ಟಾರೆ ನೀನು ನೀನಾಗಿರಕೂಡದು. ಸಮಾಜದ ನಿರೀಕ್ಷೆಯಂತೆ ಗಂಡಾಗಿ, ನಡೆದು ತೋರಿಸಬೇಕು.” ಹೀಗೊಂದು “ಗಂಡು ಮಾದರಿ”ಯನ್ನು ರಚಿಸಿ ಅನುಸರಿಸಲು ಕಟ್ಟಪ್ಪಣೆ ಕೊಡಲಾಗುತ್ತದೆ. ಇಲ್ಲಿ ಭಾವನೆಗಳಿಗೆ ಸ್ಥಾನವಿಲ್ಲ. ಕ್ರಿಯಾಶೀಲತೆಗಿದೆ. ಅದೇ ಗಂಡಸುತನದ ಲಕ್ಷಣ. ಹಾಗಾಗಿ ಪುರುಷರು ತಮಗೆ ಸಹಜವಾಗಿ ಬಂದ ಪುರುಷತ್ವವನ್ನು ಸವಾಲೆಂದು ಸ್ವೀಕರಿಸಿ ಆಗಾಗ ಸಾಬೀತು ಪಡಿಸಬೇಕಾಗುತ್ತದೆ. ಇಲ್ಲದಿದ್ದರೆ ಹೆಣ್ಣಿಗ, ಹೇಡಿ, ಕೈಲಾಗದವನು, ಪುಕ್ಕಲು, ಅಪಾತ, ಹೇತಲಾಂಡಿ ಎಂದು ಹೆಸರಿಸಿ ಹೀಗಳೆದು ದೂರೀಕರಿಸಲಾಗುತ್ತದೆ. ಅದಕ್ಕಾಗಿಯೇ, “ಗಂಡಸಾದರೆ ಮುನ್ನುಗ್ಗು” ಎನ್ನುವ ಸವಾಲು, “ಗಂಡಸು ಕೂತು ಕೆಟ್ಟ…” ಎನ್ನುವ ಗಾದೆ ಹುಟ್ಟಿಕೊಂಡಿವೆ. ಹೀಗೆಯೇ “ಹೆಣ್ಣನ್ನು ಕಾಮಕ್ರಿಯೆಯಲ್ಲಿ ತೃಪ್ತಿ ಪಡಿಸದೆ ಇರುವವನು ಗಂಡಸಲ್ಲ” ಎಂಬ ನಂಬಿಕೆಯೂ ಪ್ರಚಲಿತವಾಗಿದೆ.
ಗಂಡು ತನ್ನ ಸಹಜ ಭಾವನೆಗಳನ್ನು ಹತ್ತಿಕ್ಕುವ ಪರಿಣಾಮವು ಮೂರು ರೂಪಗಳಲ್ಲಿ ಕಾಣುತ್ತದೆ:
ಒಂದು: ನೈಜ ಭಾವನೆಗಳನ್ನು ಸಮಾಜವು ಒಪ್ಪುವ “ಕೃತಕ” ಭಾವನೆಗಳನ್ನಾಗಿ ಮಾರ್ಪಡಿಸುವುದು. ಉದಾ. ಭಯವನ್ನು ಆಕ್ರಮಣವನ್ನಾಗಿ, ಅಭದ್ರತೆಯನ್ನು ತಿರಸ್ಕಾರವನ್ನಾಗಿ, ಪ್ರೀತಿಯ ಕೋರೈಕೆಯನ್ನು ಹಕ್ಕೊತ್ತಾಯವಾಗಿ, ಸೂಕ್ಷ್ಮತೆಯನ್ನು ಕಾಠಿಣ್ಯವಾಗಿ ಬದಲಿಸಿ ಪ್ರಕಟಪಡಿಸುವುದು. ಉದಾಹರಣೆಗೆ, ಹೆಂಡತಿ ಮನೆಬಿಟ್ಟು ಹೋಗುತ್ತೇನೆ ಎನ್ನುವಾಗ, “ಮದುವೆಯಾದ ಹೆಂಡತಿ, ಅದುಹೇಗೆ ಬಿಟ್ಟುಹೋಗುತ್ತೀಯಾ?” ಎಂದು ನಿರ್ಬಂಧಿಸುತ್ತಾರೆಯೇ ಹೊರತು, “ನೀನಿಲ್ಲದೆ ನನಗೆ ಬದುಕಲು ಆಗುವುದಿಲ್ಲ” ಎಂದು ಮನಸ್ಸು ಬಿಚ್ಚಿ ಬೆತ್ತಲಾಗಲು ಒಪ್ಪುವುದಿಲ್ಲ – ಹಾಗೆ ಮಾಡಿದರೆ ಅವಲಂಬನೆ ತೋರಿಸಿದಂತಾಗಿ ಆಕೆ ತನ್ನ ಮೇಲೆ ಸವಾರಿ ಮಾಡಬಹುದು ಎಂಬ ಆತಂಕ ಇದಕ್ಕೆ ಕಾರಣ. ಇಲ್ಲಿ ಒಂದು ದಂಪತಿ ನೆನಪಾಗುತ್ತಿದ್ದಾರೆ. ಇವರ ಕಾಮಕ್ರಿಯೆಯಲ್ಲಿ ಹೆಂಡತಿಯು ಮೇಲೆ ಬಂದು ಚಲಿಸಿದರೆ ಮಾತ್ರ ಭಾವಪ್ರಾಪ್ತಿ ಆಗುತ್ತಿತ್ತು, ಆದರೆ ಅದಕ್ಕೆ ಗಂಡ ಒಪ್ಪುತ್ತಿರಲಿಲ್ಲ. ಬದಲಾಗಿ ತಾನೇ ಮೇಲೆಬಂದು ಎಷ್ಟೇ ಹೊತ್ತಾದರೂ ಘರ್ಷಿಸಲು ಇಷ್ಟಪಡುತ್ತಿದ್ದ. ಹೆಣ್ಣನ್ನು ಸಂಭೋಗದ ಮೂಲಕ ತೃಪ್ತಿ ಪಡಿಸದೆ ಹೋದರೆ ಆಕೆ ತನ್ನನ್ನು ಕೀಳಾಗಿ ಕಾಣುತ್ತಾಳೆ ಎಂಬ ಭಯ ಅವನಲ್ಲಿತ್ತು. ಅದನ್ನು ಭಯದ ಮೂಲಕ ತೋರಿಸದೆ (ಕಾಮಕೂಟದಲ್ಲಿ) ಹೆಚ್ಚಾಗಿ ಕ್ರಿಯಾಶೀಲ ಆಗುವುದರ ಮೂಲಕ ತೋರ್ಪಡಿಸಿಕೊಳ್ಳುತ್ತಿದ್ದ. ಹೀಗೆ ಚಿಂತೆಗಳು ಹೆಚ್ಚಾದಾಗ ಗಂಡಸರು ಸಂಗಾತಿಯೊಡನೆ ಹಂಚಿಕೊಳ್ಳುವುದು, ಅಥವಾ ಎಲ್ಲದಕ್ಕೂ ವಿರಾಮ ಕೊಟ್ಟು ಆತ್ಮವಿಶ್ಲೇಷಣೆಯಲ್ಲಿ ತೊಡಗುವುದು ಮಾಡುವುದಿಲ್ಲ. ಬದಲಾಗಿ ಒಬ್ಬೊಂಟಿಗರಾಗಿ ಅವಸರದಿಂದ “ಏನಾದರೂ ಮಾಡಬೇಕು” ಎಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಅನೇಕ ಗಂಡಸರು ಒಂದಾದ ನಂತರ ಒಂದು ವ್ಯವಹಾರಕ್ಕೆ ಕೈಹಾಕಿ ಸರಣಿ ನಷ್ಟ ಅನುಭವಿಸಿದ್ದು ಇದೆ.
ಇನ್ನುಳಿದ ಪರಿಣಾಮಗಳನ್ನು ಮುಂದಿನ ಸಲ ನೋಡೋಣ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888.