ಸುಖೀ ದಾಂಪತ್ಯ ೧೮೨
ಹೊರಗಿನಿಂದ ಚಾಳಿ ಇರುವವರು ಅದನ್ನು ನಿಲ್ಲಿಸಿದರೆ ದಾಂಪತ್ಯ ಉದ್ಧಾರವಾಗುತ್ತದೆಯೆ?
182: ಸರಿಯಾದ ಸಂದೇಶ-1
ನಾವೆಲ್ಲರೂ ತಪ್ಪು ಮಾಡುತ್ತೇವೆ. ತಪ್ಪಿನಿಂದ ಬುದ್ಧಿ ಕಲಿಯಬೇಕು ಎಂದುಕೊಳ್ಳುತ್ತೇವೆ. ಆದರೆ ಹೆಚ್ಚಿನವರಿಗೆ ಬುದ್ಧಿ ಕಲಿಯುವ ಮಾರ್ಗೋಪಾಯಗಳು ಗೊತ್ತಿರುವುದಿಲ್ಲ. ಹಾಗಾಗಿ ಹೆಚ್ಚೆಂದರೆ ಮುಂದೆ ತಪ್ಪು ಮಾಡದಂತೆ ಎಚ್ಚರ ವಹಿಸುತ್ತೇವಷ್ಟೆ. ಇದೆಷ್ಟು ಪರಿಣಾಮಕಾರಿ, ಹಾಗೂ ದಾಂಪತ್ಯದ ಸಂಬಂಧಗಳ ಮೇಲೆ ಇದರ ಫಲಶ್ರುತಿ ಏನು ಎಂಬುದಕ್ಕೆ ಸಾಕ್ಷಿಯಾಗಿದೆ ಸಂದೇಶನ ಕಥೆ.
ಸಂದೇಶ (ನಿಜವಾದ ಹೆಸರಲ್ಲ) ಮೂವತ್ತೈದರ ತರುಣ. ಜನನಾಂಗದ ಸೋಂಕು ತಗುಲಿ ಚಿಕಿತ್ಸೆಗಾಗಿ ನನ್ನಲ್ಲಿ ಬಂದಿದ್ದ. ಸೋಂಕು ಹೇಗಾಯಿತು ಎಂದು ವಿಚಾರಿಸಿದಾಗ ವಿವರಿಸಿದ. ಅವನು ಮಸಾಜ್ ಪಾರ್ಲರ್‌ಗೆ ಹೋಗಿದ್ದನಂತೆ. ಅಲ್ಲಿಯ ತರುಣಿ ಮೈಗೆ ಮಸಾಜ್ ಮಾಡುತ್ತ ಅದಕ್ಕೂ ಮಾಡಲೇ ಎಂದು ಕೇಳಿದಳಂತೆ. ಇವನು ಒಪ್ಪಿದ. ಅದಾಗಿ ಎರಡು ವಾರಗಳ ನಂತರ ಶಿಶ್ನಕ್ಕೆ ಸೋಂಕು ತಗುಲಿದ್ದು ಗೊತ್ತಾಗಿದೆ. ಮುಂಚೆ ಯಾವೊತ್ತೂ ಹೀಗಾಗಿರಲಿಲ್ಲ. ಗೂಗಲಿಸಿ, ಎಚ್.ಐ.ವ್ಹಿ. ಅಥವಾ ಮತ್ತೇನಾದರೂ ಲೈಂಗಿಕ ರೋಗ ಇರಬಹುದೆಂದು ಭಯಪಟ್ಟು ನನ್ನಲ್ಲಿ ಧಾವಿಸಿದ್ದಾನೆ.
ಪಾರ್ಲರ್ ತರುಣಿ ಇವನಿಗೆ ಸುಖಕೊಟ್ಟ ರೀತಿಯನ್ನು ವಿಚಾರಿಸಿದೆ. ಆಕೆ ಇವನಿಗೆ ಮುಷ್ಟಿಮೈಥುನ ಮಾಡಿದಳಂತೆ – ಕೈಗವಸು ಧರಿಸದೆ. ಆಗ ಶಿಶ್ನದ ಮುಂದೊಗಲು ಎಳೆದಂತಾಗಿತ್ತೆ ಎಂದು ಕೇಳಿದ್ದಕ್ಕೆ ಹೌದೆಂದ. ಪರೀಕ್ಷೆ ಮಾಡಲಾಗಿ, ಅವನ ಮುಂದೊಗಲು ಮಣಿಯೊಡನೆ ಸೇರುವ ಜಾಗದಲ್ಲಿ ಚರ್ಮ ಹರಿದಂತಾಗಿ ಸೋಂಕು ಆಗಿದ್ದುದು ಕಂಡಿತು. ಅವನಿಗೆ ಆ ಜಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ತಿಳಿಸಿ ಔಷಧಿ ಬರೆದುಕೊಟ್ಟೆ. ರಕ್ತಪರೀಕ್ಷೆ ಮಾಡಿಸಿಕೊಳ್ಳಲು ಹೇಳಿ, ವರದಿಯನ್ನು ವಾಟ್ಸಪ್ ಮೂಲಕ ಕಳಿಸಬಹುದು ಎಂದೆ. ಮೂರು ದಿನಗಳ ನಂತರ ಕಳಿಸಿದ ವರದಿಯಲ್ಲಿ ಕಾಯಿಲೆಯ ಗುರುತೇನೂ ಇರಲಿಲ್ಲ. ಹಾಗಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ ಎಂದು ತಿಳಿಸಿ ಕೈಬಿಟ್ಟೆ.
ಇದಾಗಿ ಎರಡು ವಾರಗಳ ನಂತರ ಸಂದೇಶ ಭೇಟಿಯಾಗಲು ಮತ್ತೆ ಬಂದ. ನನಗೆ ಕುತೂಹಲವಾಯಿತು. ಸೋಂಕು ಗುಣವಾಗಲಿಲ್ಲವೆ? ಅಥವಾ ಇನ್ನೊಂದು ಸಲ…? ಕಾರಣ ಕೇಳಿದೆ. ಅವನು ನೆಮ್ಮದಿಯಿಂದ ಹೇಳಿದ: “ನಿಮ್ಮ ಚಿಕಿತ್ಸೆಯಿಂದ ಚರ್ಮದ ಸೋಂಕು ಪೂರ್ತಿ ಗುಣವಾಗಿದೆ. ಒಮ್ಮೆ ಭೇಟಿಯಾಗಿ ಕೃತಜ್ಞತೆ ಸಲ್ಲಿಸೋಣ ಎಂದು ಬಂದೆ.” ಅದನ್ನು ಫೋನ್ ಮೂಲಕ ತಿಳಿಸಿದ್ದರೆ ಸಾಕಿತ್ತಲ್ಲ ಎಂದಾಗ, “ರಿಪೋರ್ಟ್ ಪ್ರತ್ಯಕ್ಷವಾಗಿ ತೋರಿಸಿ ಖಾತರಿ ಮಾಡಿಕೊಳ್ಳಬೇಕಿತ್ತು…” ಎನ್ನುತ್ತ ವರದಿಯನ್ನು ನನ್ನೆದುರು ಹರವಿದ. ಇಲ್ಲಿ ವೈದ್ಯಕೀಯ ಕಾರಣವಿರದೆ, ಮರಳಿದ ನೆಮ್ಮದಿಯನ್ನು ನಂಬಿಕಸ್ಥರ ಜೊತೆಗೆ ಹಂಚಿಕೊಂಡು ಹಗುರವಾಗಬೇಕು ಎನ್ನುವ ಸಹಜ ಬಯಕೆ ಎದ್ದುಕಾಣುತ್ತಿತ್ತು. “ಸರಿ, ನಿಮ್ಮ ಚರ್ಮದಲ್ಲೂ ರಕ್ತದಲ್ಲೂ ಕಾಯಿಲೆಯ ಚಿಹ್ನೆಗಳಿಲ್ಲ. ಎಲ್ಲವೂ ಗುಣವಾಗಿದೆ ಎಂದಾಯಿತಲ್ಲ, ಹೇಗನ್ನಿಸುತ್ತಿದೆ? ಮುಂದೇನು?…” ಎಂದು ಮಾತು ತೇಲಿಬಿಟ್ಟೆ. ನನ್ನ ಅಭಿಪ್ರಾಯವನ್ನು ಮೈಯೆಲ್ಲ ಕಿವಿಯಾಗಿ ಕೇಳಿಸಿಕೊಂಡ ನಂತರ ಅವನು ಕೊಟ್ಟ ಉತ್ತರವು ನಾನು ನೆಟ್ಟಗೆ ಕುಳಿತುಕೊಂಡು ಗಮನಿಸುವಂತೆ ಮಾಡಿತು.
“ಮುಂದೆ ಇನ್ನೆಂದೂ ಇಂಥ ತಪ್ಪು ಮಾಡುವುದಿಲ್ಲ!” ಅಪಘಾತವನ್ನು ಕೂದಲೆಳೆಯಲ್ಲಿ ತಪ್ಪಿಸಿಕೊಂಡ ಭಾವದಲ್ಲಿ ಸಂದೇಶ ನಿಟ್ಟುಸಿರಿಟ್ಟ. “ಈ ಎರಡು ವಾರ ಬೆಂಕಿಯ ಮೇಲೆ ಕಾಲಿಟ್ಟಂತೆ ಒದ್ದಾಡುತ್ತಿದ್ದೆ. ಇನ್ನೊಂದು ಸಲ ಇಂಥದ್ದಕ್ಕೆ ಕೈಹಾಕುವುದಿಲ್ಲ! ಸುಖಪಟ್ಟರೆ ಹೆಂಡತಿಯ ಜೊತೆಗೇ.”
ಅವನ ನಿಟ್ಟುಸಿರು ಅರ್ಥವಾಯಿತು. ಜೊತೆಗೆ ಅವನ ಇತಿಮಿತಿಯೂ ಅರ್ಥವಾಯಿತು. “ಅಂದರೆ ಹೊರಗಿನ ಹವ್ಯಾಸವನ್ನು ನಿಲ್ಲಿಸುವ ನಿಮ್ಮ ನಿರ್ಧಾರವು ಕಾಯಿಲೆಯ ಭಯದಿಂದ ಹುಟ್ಟಿತು. ಚರ್ಮದ ಸೋಂಕು ಆಗದಿದ್ದರೆ ಪಾರ್ಲರ್ ಅಭ್ಯಾಸವನ್ನು ಮುಂದುವರಿಸುತ್ತಿರಿ, ಅಲ್ಲವೆ?” ಅವನು ಅಪ್ರತಿಭನಾಗಿ ತಲೆ ಅಲ್ಲಾಡಿಸಿದ.
ಇವನಲ್ಲೇನು ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟೆ. ಲೈಂಗಿಕ ಬಯಕೆ ಸಹಜ. ಅದನ್ನು ತೀರಿಸಿಕೊಳ್ಳಲು ತನಗೆ ಸಿಕ್ಕ ಹಾದಿಯೊಂದನ್ನು ಹಿಡಿದಿದ್ದಾನೆ. ಈ ಹಾದಿಯಲ್ಲಿ ಕಾಯಿಲೆಯ ಭಯ ಎದುರಾದಾಗ ಬಿಟ್ಟುಕೊಟ್ಟು, ಹೆಂಡತಿಯಿಂದ ಮಾತ್ರ ತೀರಿಸಿಕೊಳ್ಳುವುದಕ್ಕೆ ನಿರ್ಧರಿಸಿದ್ದಾನೆ. ಇವನಿಗೆ ಬೇಕಾದುದು ಹೆಂಡತಿಯಿಂದ ಸಿಗುವಷ್ಟು ಸರಳವಾಗಿದ್ದರೆ ಹೊರಗಿನ ಸಂಪರ್ಕದ ಅಗತ್ಯವಾದರೂ ಏನಿತ್ತು? ಇಲ್ಲಿ, “ನನಗೆ ಬೇಕಾಗಿರುವುದು ನನ್ನ ದಾಂಪತ್ಯದಲ್ಲಿ ಸಿಗುವುದಿಲ್ಲ” ಎನ್ನುವ ಅನಿಸಿಕೆ ಬಲವಾಗಿದೆ. ದಾಂಪತ್ಯದಲ್ಲಿ ಸಿಗದ ಸುಖವನ್ನು ಹೊರಗಿನಿಂದ ಪಡೆದುಕೊಳ್ಳುವುದು ಸೂಕ್ತ ಅಲ್ಲವಾದರೂ ಸಹಜವಾದದ್ದು ಎಂದು ಅನೇಕರು ಅಭಿಪ್ರಾಯ ಪಡುತ್ತಾರೆ. ಪ್ರಕೃತಿ ಸಹಜವಾದ ಕಾಮದಾಸೆಯ ಪೂರೈಕೆಗೆ ಮಾನವರಿಂದ ರೂಪುಗೊಂಡ “ದಾಂಪತ್ಯ” ಎನ್ನುವ ವ್ಯವಸ್ಥೆಯು ಅಸಹಜ ಆಗುತ್ತದೆ. ಯಾಕೆ? ದಾಂಪತ್ಯ ಮಾಡುವುದು ಸಹಜವಾಗಿ ಬರುವುದಿಲ್ಲ! ಹಾಗಾಗಿ ಅದನ್ನು ಪ್ರಯತ್ನಪಟ್ಟು ಕಲಿಯಬೇಕಾಗುತ್ತದೆ. ಹೀಗಿರುವಾಗ ಸಂದೇಶನು ಕಾಮಕ್ಕಾಗಿ ದಾಂಪತ್ಯದ ಗೆರೆ ದಾಟುವುದಿಲ್ಲ ಎನ್ನುತ್ತಿರುವುದು ಅಸಹಜತೆಯಿಂದ ಪ್ರೇರಿತ ನಿರ್ಧಾರವೆನಿಸಿತು. ಇದೆಷ್ಟು ಗಟ್ಟಿಯಾಗಿದೆ, ಎಷ್ಟುದಿನ ಉಳಿದೀತು ಎಂದು ಹೇಳಲಾಗದು. ಹಾಗಾದರೆ, ಹೊರಗಿನ ಸುಖವನ್ನು ಹುಡುಕಿಕೊಂಡು ಹೋಗುವ ನಿರ್ಧಾರಕ್ಕೆ ಕಾರಣವಾದ ಗಂಡಹೆಂಡಿರ ಬಾಂಧವ್ಯ ಹೇಗಿದೆ? ಇದರ ಬಗೆಗೆ ಸಂದೇಶ ಒಂದು ರಾಶಿ ಹೇಳಿದ.
ಇವನದು ಹೆತ್ತವರು ನಿಶ್ಚಯಿಸಿದ ವಿವಾಹ. ಹುಡುಗಿಯನ್ನು ಮೆಚ್ಚಲು ಇವನಲ್ಲಿ ನಿರ್ದಿಷ್ಟ ಕಾರಣಗಳಿರಲಿಲ್ಲ. ಇತರರು ಮೆಚ್ಚಿದ್ದಾರೆ, ಹಾಗಾಗಿ ತನಗೂ ಮೆಚ್ಚುಗೆಯಾಗಬಹುದು ಎಂದು ಒಪ್ಪಿದ. ಹೆಂಡತಿ ಜಗಳಗಂಟಿ ಏನಲ್ಲ, ತನ್ನಷ್ಟಕ್ಕೆ ತಾನಿರುತ್ತಾಳೆ. ಆದರೆ ಇವನ ಮನಸ್ಸನ್ನು ಯಾವೊತ್ತೂ ಮುಟ್ಟಿಲ್ಲ. ಸಾಲದ್ದಕ್ಕೆ ಆಕೆಗೆ ಸ್ವಚ್ಛತೆಯ, ಒಪ್ಪ-ಓರಣದ ಗೀಳಿದೆ. ಯಾವಾಗಲೂ ಅದರಲ್ಲೇ ತೊಡಗಿರುತ್ತ, ಮಗನ ಮೇಲೂ ಗಂಡನ ಮೇಲೂ ಹೇರುತ್ತ ಇರುತ್ತಾಳೆ. ಇಬ್ಬರ ನಡುವೆ ಪ್ರೇಮಸಲ್ಲಾಪ ಒತ್ತಟ್ಟಿಗಿರಲಿ, ಸ್ವಾರಸ್ಯಕರ ಮಾತುಕತೆಯೇ ನಡೆದದ್ದಿಲ್ಲ. ಎಲ್ಲರ ಮನೆಗಳಲ್ಲಿ ಅಡುಗೆ-ಊಟದ ನೆಪದಲ್ಲಿ ಗಂಡಹೆಂಡಿರ ನಡುವೆ ಒಂದುರೀತಿಯ ಸಂಪರ್ಕ ನಡೆಯುತ್ತದೆ. ಇವರಲ್ಲಿ ಅದೂ ಇಲ್ಲ – ಮೂರೂ ಹೊತ್ತಿನ ಊಟವು ಎರಡು ಬೀದಿಯಾಚೆ ಇರುವ ಆಕೆಯ ತಾಯಿಯ ಮನೆಯಿಂದ ಬರುತ್ತದೆ! ಹಾಗಾಗಿ ಹೆಂಡತಿಯೊಂದಿಗೆ ಆಪ್ತಭಾವವನ್ನು ಕಟ್ಟಿಕೊಳ್ಳಲಾಗದೆ ಸಂಬಂಧವು ವ್ಯವಹಾರ ಮಾತ್ರವಾಗಿ ಉಳಿದಿದೆ. ಲೈಂಗಿಕ ಕ್ರಿಯೆಯೇನೋ ಆಗಾಗ ನಡೆಯುತ್ತಿದೆ – ಆದರೆ ಯಾಂತ್ರಿಕವಾಗಿ. ಅಂದಹಾಗೆ, ಪಾರ್ಲರ್ ಘಟನೆಯ ನಂತರ ಶಿಶ್ನದ ಸೋಂಕು ಕಾಣಿಸಿಕೊಳ್ಳುವ ಮುಂಚೆ ಹೆಂಡತಿಯ ಜೊತೆಗೂ ಸಂಭೋಗ ಮಾಡಿದ್ದಾನೆ – ಕಾಂಡೋಮ್ ಉಪಯೋಗಿಸದೆ.
ಸಂದೇಶನ ಅಂತರಂಗದ ಅರಿವಾಯಿತು. ಇವನು ದಾಂಪತ್ಯದೊಳಗೆ ಒಂಟಿಯಾಗಿದ್ದಾನೆ. ಒಂಟಿತನವನ್ನು ಹೊರಗಿನಿಂದ ನೀಗಿಸಿಕೊಳ್ಳುತ್ತಿದ್ದಾನೆ. ಕಾಮತೃಪ್ತಿಯೇ ಏಕೆಂದರೆ, ಒಂಟಿತನ ಕಾಡುವಾಗ ಶರೀರವು ನಡೆಸುವ ಕಾಮಕ್ರಿಯೆಯು ಆಕ್ಸಿಟೋಸಿನ್, ಎಂಡಾರ್ಫಿನ್ ಇತ್ಯಾದಿಗಳನ್ನು ಬಿಡುಗಡೆ ಮಾಡುವುದರಿಂದ ಮನಸ್ಸು ಹಗುರವಾಗಿ ಮುದಗೊಳ್ಳುತ್ತದೆ. ವಿಷಯ ಹೀಗಿರುವಾಗ ಸಂದೇಶ ಹೊರಗಿನ ಸಂಪರ್ಕವನ್ನು ನಿಲ್ಲಿಸಿದರೆ ದಾಂಪತ್ಯದಲ್ಲಿ ಸಿಗದಿರುವುದು ಮತ್ತೆ ಹಪಹಪಿಯಾಗಿ ಕಾಡುವುದು ಖಂಡಿತ. ಆಗ ಕಾಯಿಲೆಯಿಂದ ಸುರಕ್ಷಿತವಾದ ಇಂಟರ್ನೆಟ್ ಕಾಮ, ಫೋನ್ ಸೆಕ್ಸ್ ಮುಂತಾದವುಗಳನ್ನು ಆರಿಸಿಕೊಳ್ಳಬಹುದು. ಏನು ಪ್ರಯೋಜನವಾಯಿತು?
ಥಟ್ಟನೆ ಏನೋ ಹೊಳೆದು ಹೇಳಿದೆ: “ಸಂದೇಶ್, ನಿಮ್ಮ ಪಾರ್ಲರ್ ಘಟನೆಯನ್ನು ಹೆಂಡತಿಯೊಂದಿಗೆ ಹಂಚಿಕೊಳ್ಳಬಲ್ಲಿರಾ?”
ನನ್ನ ಅನಿರೀಕ್ಷಿತ ಪ್ರಶ್ನೆಗೆ ಅವನು ಬೆಚ್ಚಿಬಿದ್ದ. ಕಣ್ಣಗಲಿಸಿ, ಬಾಯಿ ತೆರೆದು ಉದ್ಗರಿಸಿದ: “ಏನು ಹೇಳ್ತಿದ್ದೀರಿ ಸಾರ್? ನನ್ನ ಸಂಸಾರ ಒಡೆದು ಹೋಗುತ್ತದಷ್ಟೆ!”
ಮುಂದೇನಾಯಿತು ಎಂಬುದನ್ನು ಮುಂದಿನ ಸಲ ಹೇಳುತ್ತೇನೆ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888