ಸುಖೀ ದಾಂಪತ್ಯ ೧೭೮
ಲೈಂಗಿಕ ಸಮಸ್ಯೆಗಳು ಅಂತರಾಳದಿಂದ ಹುಟ್ಟಿದ್ದರೆ ಸಲಹೆ ಸೂಚನೆಗಳು ಕೆಲಸ ಕೊಡುವುದಿಲ್ಲ!
178: ಕಾಮಸಂಬಂಧಕ್ಕೆ ಮರುಜೀವ
ಮಿಲನದಲ್ಲಿ ತನ್ನನ್ನು ತಾನು ತೆರೆದುಕೊಂಡು ಬಯಲಾಗದಿದ್ದರೆ ತನಗೆ ತಾನೇ ಅರ್ಥವಾಗದೆ ಅನ್ಯೋನ್ಯತೆಯ ಬೆಳವಣಿಗೆಗೆ ಅವಕಾಶ ಆಗುವುದಿಲ್ಲ ಎಂದು ಹೋದಸಲ ತಿಳಿದುಕೊಂಡೆವು.
ವಯಸ್ಸಾದಂತೆ ಸವೆಯುತ್ತಿರುವ ಕಾಮಸಂಬಂಧಕ್ಕೆ ಜೀವಂತಿಕೆಯನ್ನು ತುಂಬುವುದು ಹೇಗೆ ಎಂದು ಹದಿನಾರು ಕಂತುಗಳಿಂದ ಬರೆಯುತ್ತಿದ್ದೇನೆ. ಇದರ ಬಗೆಗೆ ಓದುಗರಾದ ನಿಮ್ಮ ತಲೆಯಲ್ಲಿ ಏನು ನಡೆಯುತ್ತಿರಬಹುದು ಎಂದು ಯೋಚಿಸುತ್ತಿದ್ದೆ. ಕೆಲವರು, “ವಾಹ್, ಎಂಥ ಅದ್ಭುತ ಅನುಭವ!” ಎಂದು ಬೆರಗುಪಟ್ಟರೆ, ಇನ್ನು ಕೆಲವರು “ಐದು ನಿಮಿಷದ ಕಾರ್ಯಕ್ಕೆ ಇಷ್ಟೆಲ್ಲ ತೊಂದರೆ ತೆಗೆದುಕೊಳ್ಳಬೇಕೆ?” ಎಂದು ತಾತ್ಸಾರ ತೋರಿಸುತ್ತಿಬಹುದು. ಹಲವರು “ಇದೆಲ್ಲ ನಮ್ಮ ಕೈಯಲ್ಲಿ ಆಗುವುದಿಲ್ಲ” ಎಂದು ಹಿಂಜರಿದರೆ ಇನ್ನು ಹಲವರು, “ನೀವು ಹೇಳುವುದೆಲ್ಲ ಸರಿ, ಆದರೆ ಸಂಗಾತಿಯ ಜೊತೆಗೆ ಅನ್ವಯಿಸಿಕೊಳ್ಳುವುದು ಹೇಗೆ?” ಎಂದು ಗೊಂದಲದಲ್ಲಿರಬಹುದು, ಅಥವಾ, “ನಮ್ಮ ದಾಂಪತ್ಯದ ವಿಷಯ ನಿಮಗೆ ಗೊತ್ತಿಲ್ಲ ಬಿಡಿ!” ಎಂದು ಸಾರಾಸಗಟಾಗಿ ತಳ್ಳಿಹಾಕಬಹುದು. ಒಬ್ಬರಂತೂ, “ಸೆಕ್ಸ್ ಎಂದರೆ ಎಷ್ಟು ಕಾಂಪ್ಲಿಕೇಟ್ ಮಾಡ್ತೀರಾ, ಅದರಲ್ಲಂತೂ ನಿಮ್ಮ ಕನ್ನಡ ನಮಗೆ ಕಷ್ಟ. ಇದನ್ನು ಬಿಟ್ಟು ಸುಲಭದ ದಾರಿಯಿಲ್ಲವೆ? ಮುಂಚೆಯೆಲ್ಲ ಎಷ್ಟು ಸರಳವಾಗಿ ಬರೆಯುತ್ತಿದ್ದಿರಿ!” ಎಂದು ನೇರವಾಗೇ ಕೇಳಿದ್ದಾರೆ!
ಹೌದು, ಲೈಂಗಿಕ ಸಮಸ್ಯೆಯಿಂದ ಸುಖಕ್ಕೆ ಸುಲಭವಾದ ಹಾದಿಯನ್ನು “ಸುಖೀಭವ”ದ ಮೂಲಕ ದಶಕಕ್ಕೂ ಹೆಚ್ಚು ಕಾಲ ವಿವರಿಸಿದ್ದೆ. ಮೂಢ ನಂಬಿಕೆಗಳಿಂದ ಮೊದಲು ಮಾಡಿಕೊಂಡು ಲೈಂಗಿಕ ಶಿಕ್ಷಣ, ಮನೋಲೈಂಗಿಕ, ಪಾರಸ್ಪರಿಕ ಹಾಗೂ ಸಮಾಜ-ಲೈಂಗಿಕ ವಿಷಯಗಳ ಬಗೆಗೆ ಸರಳವಾಗಿ ವಿವರಿಸುತ್ತ ನೀವು ಕೇಳಿದ್ದಕ್ಕೆಲ್ಲ ಉತ್ತರಿಸಿದ್ದೆ. ಆಗ ನಿಮ್ಮ ಸ್ಪಂದನೆಯೂ ಮನಸ್ಸಿಗೆ ತಟ್ಟುವಂತಿತ್ತು. ಆದರೆ “ಸುಖೀಭವ”ದ ಮಾಹಿತಿಗೆ ಮಿತಿಯಿತ್ತು: ಅದೆಲ್ಲ ಹೆಚ್ಚಿನಂಶ ಜನನಾಂಗಗಳ ಸುಖಕ್ಕೆ ಸಂಬಂಧಪಟ್ಟಿದ್ದು, ಪ್ರಾಥಮಿಕ ಜ್ಞಾನದಂತೆ ಅರ್ಥಮಾಡಿಕೊಳ್ಳಲು ಸುಲಭವಾಗಿತ್ತು. ಆದರೆ ಈಗಿನ ವಿಷಯವೇ ಬೇರೆ. ಇದು ಜನನಾಂಗಗಳ ಹಿಂದಿರುವ ವ್ಯಕ್ತಿಗಳ ಪ್ರಜ್ಞಾವಂತಿಕೆಯ ಬಗೆಗೆ, ಕಾಮಸುಖದ ಆಚೆಯ ಅನ್ಯೋನ್ಯತೆಯ ಬಗೆಗೆ. ಇದೊಂದು ಉಚ್ಚ ಶಿಕ್ಷಣದ ಅಧ್ಯಯನದಂತೆ. ಹೀಗಾಗಿ ಅನೇಕರಿಗೆ ಕಬ್ಬಿಣದ ಕಡಲೆಯಾಗಿ ಬೇಸರ ತರಿಸುವುದು ನನಗೆ ಅರ್ಥವಾಗುತ್ತಿದೆ – ಚಂದಮಾಮ ಓದಿ ಖುಷಿಪಡುವವರಿಗೆ ವೈಚಾರಿಕ ಲೇಖನಗಳನ್ನು ಕೊಟ್ಟಂತೆ!
ವಾಸ್ತವ ಏನೆಂದರೆ, ದಾಂಪತ್ಯದ ಕಾಮಸಂಬಂಧವು ಮಗುವಿನಂತೆ. ಚಿಕ್ಕದಿರುವಾಗ ಮುದ್ದಾಗಿರುತ್ತದೆ ಎಂದು ಹಾಗೆಯೆ ಉಳಿಸಿಕೊಳ್ಳಲು ಆಗುವುದಿಲ್ಲ. ಮಗು ಬೆಳೆದು ಪ್ರಬುದ್ಧವಾಗುವಂತೆ ಕಾಮಸಂಬಂಧವೂ ನಮಗಿಷ್ಟ ಇರಲಿ ಇಲ್ಲದಿರಲಿ, ತನ್ನಷ್ಟಕ್ಕೆ ಬೆಳೆಯುತ್ತದೆ, ಬದಲಾಗುತ್ತದೆ. ಇದನ್ನು ತಡೆಯುವುದು ನಮ್ಮ ಕೈಯಲ್ಲಿಲ್ಲ. ಆದರೆ ಬದಲಾವಣೆ ಯಾವ ದಿಕ್ಕಿನಲ್ಲಿ ಮತ್ತು ಏನು ಆಗಬೇಕು ಎನ್ನುವುದು ನಮ್ಮ ಕೈಯಲ್ಲಿದೆ. ಇಲ್ಲವಾದರೆ ದುಷ್ಪರಿಣಾಮ ಖಂಡಿತ. ಇದನ್ನು ಅರ್ಥಮಾಡಿಕೊಳ್ಳಲು ಒಂದು ದೃಷ್ಟಾಂತ:
ಕಲೀಮನಿಗೆ (ನಿಜವಾದ ಹೆಸರಲ್ಲ) ಮೂವತ್ತೇಳು ವರ್ಷ. ಮದುವೆಯಾಗಿ ಹತ್ತು ವರ್ಷದ ಮಗ ಇದ್ದಾನೆ. ಸಮಸ್ಯೆ ಏನೆಂದರೆ ತನ್ನ ಶಿಶ್ನ ಚಿಕ್ಕದು, ಸರಿಯಾಗಿ ಗಡಸಾಗುವುದಿಲ್ಲ, ಹೆಂಡತಿಯನ್ನು ತೃಪ್ತಿಪಡಿಸಲು ಆಗುತ್ತಿಲ್ಲ ಎಂದು ಗೀಳು ಹಚ್ಚಿಕೊಂಡಿದ್ದಾನೆ. ತಜ್ಞರ ಪರೀಕ್ಷೆಗಳು, ಮಾತ್ರೆಗಳು, ಶಿಶ್ನಕ್ಕೆ ಇಂಜಕ್ಷನ್ ಆದರೂ ಸುಧಾರಣೆಯಿಲ್ಲ. ಪರಿಣಾಮವಾಗಿ ಖಿನ್ನತೆಯಾಗಿ ಮನೋವೈದ್ಯರಿಂದ ಮಾತ್ರೆ ಸೇವಿಸಿ, ಅದೂ ಬೇಸರವಾಗಿ ನಿಲ್ಲಿಸಿದ್ದಾನೆ. ಬರಬರುತ್ತ ಕಾಮಾಸಕ್ತಿ ಕುಂದುತ್ತಿದೆ. ಅವನ ಹೆಂಡತಿಯನ್ನು ವಿಚಾರಿಸಲಾಗಿ ತನಗೆ ಅತ್ಯಂತ ತೃಪ್ತಿಯಿದೆ ಎಂದೂ, ಗಂಡ ಚಿಂತಿಸುವುದೇ ತನ್ನ ಚಿಂತೆಯೆಂದೂ ಸ್ಪಷ್ಟವಾಗಿ ಹೇಳಿದ್ದಾಳೆ. ಆದರೂ ಕಲೀಮ ಸರಿಹೋಗಿಲ್ಲ.
ದಂಪತಿಯ ಕಾಮಕೂಟ ಹೇಗಿದೆ? ಕಲೀಮ ಹೆಂಡತಿಗೆ ಮುಖಮೈಥುನದಿಂದ ಶುರುಮಾಡುತ್ತಾನೆ. ಇನ್ನೇನು ತುತ್ತತುದಿ ಮುಟ್ಟುತ್ತಿದ್ದಾಳೆ ಎನ್ನುವಾಗ ಆಕೆಯ ಮೈಮೇಲೇರಿ ನಾಲ್ಕೈದು ಸಲ ಚಲಿಸುತ್ತಾನೆ. ಇಬ್ಬರಿಗೂ ತೃಪ್ತಿಯಾಗುತ್ತದೆ. ಹಾಗಾದರೆ ಸಮಸ್ಯೆ ಎಲ್ಲಿದೆ? ಶಿಶ್ನದ ಘರ್ಷಣೆಯಿಂದಲೇ ತೃಪ್ತಿಕೊಡುವ ಒತ್ತಾಸೆ ಅವನದು. ಸುಮಾರು ಶೇ. 70ರಷ್ಟು ಹೆಂಗಸರು ಶಿಶ್ನದ ಘರ್ಷಣೆಯ ಮೂಲಕ ತೃಪ್ತಿ ಹೊಂದಲಾರರು, ಹಾಗಾಗಿ ಭಗಾಂಕುರದ ಸ್ಪರ್ಶ ಬೇಕೇಬೇಕು ಎಂದುದಕ್ಕೆ ಅವನ ಉತ್ತರ ಏನು? “ಅದು ನನಗೂ ಗೊತ್ತು. ಆಕೆಗೆ ತೃಪ್ತಿಯಾದರೂ ಆಕೆಗೆ ತೃಪ್ತಿ ಕೊಟ್ಟದ್ದಕ್ಕೆ ನನಗೆ ತೃಪ್ತಿಯಾಗುವುದಿಲ್ಲ. ಹಾಗಾಗಿ ಹೆಚ್ಚಿನ ತೃಪ್ತಿ ಕೊಡುತ್ತ ಅದನ್ನು ಸ್ವೀಕರಿಸಲು ಒತ್ತಾಯಿಸುತ್ತೇನೆ.” ಆಕೆ ಬೇಡವೆಂದಾಗ ತಿರಸ್ಕೃತನಾಗಿ ಒಂಟಿಯಾಗುತ್ತಾನೆ. ಖಿನ್ನತೆ ಆವರಿಸಿಕೊಳ್ಳುತ್ತದೆ. ಸಂಬಂಧದಲ್ಲಿ ಅರ್ಥವಿಲ್ಲದಾಗಿ ಬದುಕುವ ಬಯಕೆ ಕಮರುತ್ತಿದೆ.
ಪ್ರತಿಯೊಬ್ಬರು ಕಾಮಕೂಟದಲ್ಲಿ ತೋರುವ ವರ್ತನೆಗೂ ಅವರ ವ್ಯಕ್ತಿತ್ವಕ್ಕೂ ನಿಕಟ ಸಂಬಂಧವಿದೆ ಎಂದು ಹೇಳುತ್ತಿದ್ದೆ ಅಲ್ಲವೆ? ಇದು ಕಲೀಮನಲ್ಲೂ ಕಾಣುತ್ತದೆ. ಅವನು ಕೂಡುಕುಟುಂಬದಲ್ಲಿ ಹನ್ನೆರಡರಲ್ಲಿ ಒಬ್ಬನಾಗಿ ಇದ್ದಾನೆ. ಮೂವರು ಸೋದರರಲ್ಲಿ ನಡುವಿನವನು. ಅಪ್ಪನನ್ನು ಹಿಡಿದು ಯಾರೂ ಇವನನ್ನು ಈಗಲೂ ಮಾತಾಡಿಸುವುದಿಲ್ಲ. ತಾನು ಯಾರೆಂದು ಗುರುತಿಸಲ್ಪಡದೆ ಗುಂಪಿನಲ್ಲಿ ಕಳೆದುಹೋದ ಅನಾಥನಂತೆ ಬೆಳೆದಿದ್ದಾನೆ. ಇವನಿಗೆ ಪ್ರೀತಿ ತೋರಿಸಿದ್ದು ಅಜ್ಜಿ ಮಾತ್ರ. ಆಕೆಯ ಜೊತೆಗೆ ಆತನ ಹರಟೆ, ಹಂಚಿಕೊಳ್ಳುವುದು ಎಲ್ಲ ನಡೆಯುತ್ತ ಆತನ ಆತ್ಮಗೌರವ ಹುಟ್ಟಿದೆ. ದುರದೃಷ್ಟಕ್ಕೆ ಇವನಿಗೆ ಮಗುವಾದ ನಂತರ ಆಕೆ ತೀರಿಕೊಂಡಿದ್ದಾಳೆ. ಅದರೊಂದಿಗೆ ಅವನ ಪ್ರೀತಿಯ ಸೆಲೆಯೂ ಬತ್ತಿ ಖಾಲಿತನ ಉಂಟಾಗಿದೆ. ಅದನ್ನು ಭರ್ತಿ ಮಾಡಬೇಕಾದವಳು ಹೆಂಡತಿ ಒಬ್ಬಳೇ. ಅವಳಿಂದ ಪಡೆದುಕೊಳ್ಳಲು ಏನಾದರೂ ಕೊಡಬೇಕಲ್ಲವೆ? ಅದಕ್ಕಾಗಿಯೇ ದೊಡ್ಡ ಶಿಶ್ನ, ಹೆಚ್ಚಿನ ಕಾಮಕ್ಷಮತೆಯನ್ನು ಬಯಸುತ್ತಿದ್ದಾನೆ. ಕಾಮಕೂಟದಲ್ಲಿ ಹೆಂಡತಿಯನ್ನು ಮೆಚ್ಚಿಸಿ ಬದುಕಲು ಅರ್ಹತೆಯನ್ನು ಪಡೆಯುವ ಹವಣಿಕೆ. ವಿಚಿತ್ರವೆಂದರೆ, ಅಜ್ಜಿ ತೀರಿಕೊಂಡ ನಂತರವೇ ಅವನ ಲೈಂಗಿಕ ಸಮಸ್ಯೆ ಹುಟ್ಟಿದೆ.
ಕಲೀಮನ ಅಂತರಾಳದ ಪ್ರಕ್ರಿಯೆಯನ್ನು ನೋಡೋಣ: ಲೈಂಗಿಕತೆಯು ಇಡೀ ವ್ಯಕ್ತಿತ್ವದ ಭಾಗ ಎಂದು ಹೇಳುತ್ತಿದ್ದೆನಲ್ಲವೆ? ಇಲ್ಲಿ ಶಿಶ್ನವು ಅವನ ವ್ಯಕ್ತಿತ್ವದ ಸಂಕೇತ. ಅವನಿಗಿರುವ ವ್ಯಕ್ತಿತ್ವಕ್ಕೆ ಮಹತ್ವವಿಲ್ಲ; ಹಾಗೆಯೇ ಅವನಿಗಿರುವ ಶಿಶ್ನವೂ ಲೆಕ್ಕಕ್ಕಿಲ್ಲ. ತಾನು ಕ್ಷುಲ್ಲಕ ಎಂದು ನಂಬಿರುವಂತೆ ತನ್ನ ಶಿಶ್ನವೂ ಕ್ಷುಲ್ಲಕ ಎಂದು ನಂಬಿದ್ದಾನೆ.
ಶಿಶ್ನವನ್ನು ದೊಡ್ಡದು ಮಾಡಲು ಉಪಾಯವಿಲ್ಲ, ಅದಕ್ಕೇನು ಮಾಡಬಲ್ಲ ಎಂದು ಕೇಳಿದಾಗ ಅವನ ಉತ್ತರ ಯಾರನ್ನೂ ಬೆಚ್ಚಿಬೀಳಿಸುವಂತಿದೆ: ಮಗ ದೊಡ್ಡವನಾಗುವ ತನಕ ಕಾಯುವುದು, ನಂತರ ತನ್ನ ಬದುಕನ್ನು ಕೊನೆಗೊಳಿಸುವುದು! ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವವರ ಪೈಕಿ ಇಂಥವರು ಎಷ್ಟಿದ್ದಾರೋ?
ಈಗ ಹೇಳಿ: ಕಲೀಮನಂಥ ವ್ಯಕ್ತಿತ್ವ ಉಳ್ಳವರಿಗೆ ಕಾಮಕೂಟದ ವಿಶೇಷ ಕೌಶಲ್ಯಗಳನ್ನು (ಉದಾ. ಉದ್ರೇಕಿಸುವ ವಿಧಾನ, ವಿಶೇಷ ಆಸನಗಳು, ಸ್ಖಲನ ಮುಂದೂಡುವ ಕ್ರಮ) ಹೇಳಿಕೊಟ್ಟರೆ ಉಪಯೋಗವಿದೆಯೆ? ಹೌದಾದರೆ “ಸುಖೀಭವ”ದ ನಂತರ ಇನ್ನೊಂದು ಸಲ ಬರವಣಿಗೆಯನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ.
ಹಾಗಾದರೆ ಪರಿಹಾರ? ಲೈಂಗಿಕ ಸಮಸ್ಯೆಯು ಅಂತರಾಳದಿಂದ ಬಂದಿರುವವರ ಸ್ವಂತಿಕೆಯನ್ನು ಬಡಿದೆಬ್ಬಿಸಿ, ವ್ಯಕ್ತಿತ್ವವನ್ನು ಸಬಲಗೊಳಿಸಬೇಕು. ಆಗ ಮಾತ್ರ ಅವರು ಕಾಮಕ್ರಿಯೆಯಲ್ಲಿ ಮರುಜೀವ ತುಂಬಬಲ್ಲರು. ಇರುವ ಜನನಾಂಗಗಳನ್ನು ಸಮರ್ಪಕವಾಗಿ ಉಪಯೋಗಿಸುತ್ತ ಸಂಗಾತಿಯೊಡನೆ ಹೆಚ್ಚಿನ ಸ್ತರದಲ್ಲಿ ಅನ್ಯೋನ್ಯತೆಯನ್ನು ಸಾಧಿಸಬಲ್ಲರು. ಇದೇ ಲೈಂಗಿಕತೆಯ ಪುನರುಜ್ಜೀವನ. ಇದೇ ನನ್ನ ಲೇಖನಮಾಲೆಯ ಉದ್ದೇಶ.
ಉಚಿತ ಸಹಾಯವಾಣಿಗೆ ಕರೆಮಾಡಿ: 8494944888